ಓ ನನ್ನ ಚೇತನ, ಆಗು ನೀ ಅನಿಕೇತನ
ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, 
ಎದೆಯ ಬಿರಿಯೆ ಭಾವ ದೀಟಿ,
ಓ ನನ್ನ ಚೇತನ, ಆಗು ನೀ ಅನಿಕೇತನ

ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ, ಆಗು ನೀ ಅನಿಕೇತನ

ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು,
ಕೊನೆಯನೆಂದು ಮುಟ್ಟದಿರು,
ಓ ಅನಂತವಾಗಿರು,
ಓ ನನ್ನ ಚೇತನ, ಆಗು ನೀ ಅನಿಕೇತನ

ಅನಂತ ತಾನ್ ಅನಂತವಾಗಿ, ಆಗುತಿಹನೆ ನಿತ್ಯಯೋಗಿ,
ಅನಂತ ನೀ ಅನಂತವಾಗು, ಆಗು ಆಗು ಆಗು ಆಗು,
ಓ ನನ್ನ ಚೇತನ, ಆಗು ನೀ ಅನಿಕೇತನ
Category:ಕುವೆಂಪು_ಗೀತೆಗಳು
 ಕವನ ಸಂಕಲನಗಳು